ಜಾನ್ (ಪೋಪರು)-
ಕ್ಯಾತೊಲಿಕ್ ಧರ್ಮಸಭೆಯಲ್ಲಿ ಪರಮಾಧಿಕಾರವನ್ನು ಪಡೆದಿರುವ 22 (ಮತ್ತೊಂದು ಲೆಕ್ಕದಂತೆ 23) ಜಗದ್ಗುರುಗಳಿಗೆ ಜಾನ್ ಎಂಬ ಹೆಸರೇ ಇದೆ. ಇವರಲ್ಲಿ ಹೆಚ್ಚಿನವರು ಇಟಲಿಯವರು, ಅದರಲ್ಲೂ ರೋಮಿನವರು. ಗ್ರೀಸ್, ಡಲ್‍ಮೇತ್ಸಿಯ, ಸಿರಿಯ, ಫ್ರಾನ್ಸ್, ಪೋರ್ಚುಗಲ್ ದೇಶದವರೂ ಒಬ್ಬೊಬ್ಬರು ಇದ್ದರು. ಒಂದನೆಯ ಜಾನನನ್ನು ಸಂತ ಎಂದು ಗೌರವಿಸಲಾಗುತ್ತದೆ. ಇಪ್ಪತ್ತಮೂರನೆಯ ಜಾನನಿಗೂ ಅದೇ ಗೌರವವನ್ನು ಕೊಡುವುದಕ್ಕೆ ಪೂರ್ವಭಾವಿ ವಿಚಾರಗಳು ಆರಂಭವಾಗಿವೆ.

	ಪೋಪನನ್ನು ಚುನಾಯಿಸುವಾಗ ಧನದ ಪ್ರಭಾವವನ್ನು ನಿಷೇಧಿಸುವ ಶಾಸನವನ್ನು ಎರಡನೆಯ ಜಾನ್ (533-35) ಅತ್ಯಾಲರಿಕ್ ಎಂಬ ರಾಜನ ಆಜ್ಞೆಯ ಮೂಲಕ ಕಾರ್ಯರೂಪಕ್ಕೆ ತಂದ. ನಾಲ್ಕನೆಯ ಜಾನ್(640-42) ಸ್ಲಾವರು ಬಂಧನದಲ್ಲಿಟ್ಟ ಕ್ರೈಸ್ತರನ್ನು ಒತ್ತೆಹಣ ಕೊಟ್ಟು ಬಿಡುಗಡೆಗೊಳಿಸಿದ. ಸ್ಲಾವ್ ಜನರಿಗೆ ಧರ್ಮೋಪದೇಶ ಮಾಡುವುದಕ್ಕಾಗಿ ಹೋದ ಸೇಂಟ್ ಮೆತೋಡಿಯಸ್ ಎಂಬಾತನಿಗೆ ಬೆಂಬಲವಾಗಿ ನಿಂತವ ಎಂಟನೆಯ ಜಾನ್(872-882). ಇಟಲಿಯನ್ನು ಅರಬ್ಬೀ ಕಡಲುಗಳ್ಳರ ಕೀಟಲೆಯಿಂದ ಸಂಪೂರ್ಣವಾಗಿ ರಕ್ಷಿಸಬೇಕೆಂದು ಪ್ರಯತ್ನ ಪಟ್ಟು, ವಾಸ್ತವವಾಗಿ ತಾನೇ ಸೇನಾಧಿಪತಿಯಾಗಿ ರೋಮ್ ನಗರದ ರಕ್ಷಣೆಯನ್ನು ನಿರ್ವಹಿಸಿದ. ಹತ್ತನೆಯ ಜಾನ್ (914-928) ತಿಯೊಫಿಲ್ಯಾಕ್ಟಸ್ ಮನೆತನದವರ ಪ್ರಭಾವದಿಂದ ಅಧಿಕಾರಕ್ಕೆ ಬಂದವ. ಇವನ ಕಾಲದಲ್ಲಿ ಅರಬ್ಬೀ ಕಡಲುಕಳ್ಳರ ಬಲ ಬಹಳವಾಗಿ ಕುಗ್ಗಿತು. ಕ್ಲೂನಿ ಮಠದವರ ಕಠಿನ ಸ್ವಭಾವದ ನಿಯಮಾವಳಿಗಳನ್ನು ಅನುಷ್ಠಾನಕ್ಕೆ ತರುವಂತೆ ಅಪ್ಪಣೆ ಕೊಟ್ಟವ ಇವನೇ. ಹನ್ನೆರಡನೆ ಜಾನ್ (955-964) ತನ್ನ ಅಧಿಕಾರಸ್ಥಾನದ ಪಾವಿತ್ರ್ಯಕ್ಕೆ ಯೋಗ್ಯನಾಗಿದ್ದಂತೆ ಕಾಣುವುದಿಲ್ಲ. ಹತ್ತನೆಯ ಜಾನನಿಂದ ಹತ್ತೊಂಬತ್ತನೆಯ ಜಾನನವರೆಗೆ ಪೋಪರನ್ನು ಅಧಿಕಾರಕ್ಕೆ ಏರಿಸುವುದರಲ್ಲಿ ರೋಮ್ ನಗರದ ಕ್ರೆಶೆಂತ್ಸಿಯ, ತುಸ್ಕುಲಾನಿ ಮನೆತನದವರು, ಜರ್ಮನಿಯ ಆಟೊ ಚಕ್ರಾಧಿಪತಿ-ಇವರು ಪ್ರಧಾನ ಪಾತ್ರವಹಿಸಿದರು. ತಮ್ಮ ಅಭ್ಯರ್ಥಿ ಅಧಿಕಾರದಲ್ಲಿರುವುದಕ್ಕೆ ಸೈನಿಕ ಬಲವೂ ಸೇರಿದಂತೆ ಅನೇಕ ರಾಜಕೀಯ ಒತ್ತಾಯಗಳನ್ನು ಇವರು ಬಳಸುತ್ತಿದ್ದರು.

	ಕ್ರೈಸ್ತಮತದಲ್ಲಿ ಶ್ರೇಷ್ಠರಾದ ಭಕ್ತರೆನಿಸಿದವರನ್ನು ಸಂತ ಎಂದು ಪೋಪರು ಘೋಷಿಸುವ ಕ್ರಮ ಹದಿನೈದನೆಯ ಜಾನನ (985-996) ಕಾಲದಲ್ಲಿ ಜಾರಿಗೆ ಬಂತು. ದೇವಶಾಸ್ತ್ರಜ್ಞ, ತತ್ತ್ವಶಾಸ್ತ್ರಜ್ಞ ಮತ್ತು ವಿಜ್ಞಾನಿ ಎಂದು ಪ್ರಸಿದ್ಧಿ ಪಡೆದವ ಇಪ್ಪತ್ತೊಂದನೆಯ ಜಾನ್ (1276-77). ಈತ 13ನೆಯ ಶತಮಾನದಲ್ಲಿ ಬರೆದ ಸುಮ್ಮುಲೇ ಲೊಜಿಕ್ಯಾಲೆಸ್ ಎಂಬ ಗ್ರಂಥ 17ನೆ ಶತಮಾನದವರೆಗೂ ಪ್ರಚಾರದಲ್ಲಿದ್ದು ತರ್ಕಶಾಸ್ತ್ರದ ಬೆಳವಣಿಗೆಗೆ ಬಹುತೇಕ ಪ್ರಮಾಣದಲ್ಲಿ ಕಾರಣವಾಯಿತು ಎಂಬ ಅಭಿಪ್ರಾಯವಿದೆ. ಅರಿಸ್ಟಾಟಲನ ದೆ ಆನಿಮಾ ಮತ್ತು ದೆ ಆನಿಮಾಲಿಬುಸ್ ಗ್ರಂಥಗಳನ್ನು ವ್ಯಾಖ್ಯಾನಮಾಡಿದ ಲ್ಯಾಟಿನ್ ವಿದ್ವಾಂಸರಲ್ಲಿ ಈತ ಆದ್ಯ ಸಂಪ್ರದಾಯದವ. ವೈದ್ಯಶಾಸ್ತ್ರ ಸಂಬಂಧ ಗ್ರಂಥಗಳನ್ನೂ ರಚಿಸಿದ್ದನೆಂದು ತಿಳಿದುಬರುತ್ತದೆ. ಇಪ್ಪತ್ತೆರಡನೆಯ ಜಾನ್ (1316-1334) ಸಾಂಪ್ರದಾಯಿಕ ನಂಬಿಕೆಗಳೊಡನೆ ಸಂಪೂರ್ಣವಾಗಿ ಒಮ್ಮತದಿಂದಿರದ ಕೆಲವು ವೈಯಕ್ತಿಕ ಅಭಿಪ್ರಾಯಗಳನ್ನು ಇಟ್ಟುಕೊಂಡಿದ್ದ. ಆ ನಂಬಿಕೆಗಳು ಬೈಬಲ್ ಮತ್ತು ಧರ್ಮಸಭೆಯ ಸಂಪ್ರದಾಯಗಳಿಗೆ ವಿರೋಧವಾದುವು ಎಂದು ಖಚಿತವಾಗಿ ತೋರಿಸಿಕೊಟ್ಟರೆ ಅವನ್ನು ಕೈಬಿಡುವುದಾಗಿ ಹೇಳಿದ್ದ. ಇವನ ಕಾಲದಲ್ಲಿ ಧರ್ಮಸಭೆಯ ಆಡಳಿತ ಬಿಗಿಯಾಯಿತು. ಪರದೇಶಗಳಲ್ಲಿ ಧರ್ಮಪ್ರಚಾರ, ಕಲೆ, ವಿದ್ಯೆಗಳಿಗೆ ಪ್ರೋತ್ಸಾಹ ದೊರೆಯಿತು. ಕಾಹೊರ್ಸ್ ಎಂಬ ವಿಶ್ವವಿದ್ಯಾಲಯವನ್ನು ಇವನು ಸ್ಥಾಪಿಸಿದ.

	ಇಪ್ಪತ್ತಮೂರನೆಯ ಜಾನ್ (1958-1963) ತನ್ನ 77ನೆಯ ವಯಸ್ಸಿನಲ್ಲಿ ಅಧಿಕಾರಕ್ಕೆ ಬಂದು ಕ್ಯಾತೊಲಿಕ್ ಧರ್ಮಸಭೆಯಲ್ಲಿ ಒಂದು ಹೊಸ ಯುಗವನ್ನೇ ಪ್ರವರ್ತಿಸಿದ.

	ಈತನ ಅತಿ ದೊಡ್ಡ ಸಾಧನೆ ಎಂದರೆ ಈತ ಕರೆದು ಆರಂಭಿಸಿದ ಎರಡನೆಯ ವ್ಯಾಟಿಕನ್ ವಿಶ್ವ ಸಭೆ. 1962ರಲ್ಲಿ ಸಮಾವೇಶಗೊಂಡ ಈ ಸಭೆಯಲ್ಲಿ ಜಗತ್ತಿನ ಎಲ್ಲ ಕ್ಯಾತೊಲಿಕ್ ಧರ್ಮಾಧ್ಯಕ್ಷರೂ ಭಾಗವಹಿಸಿದ್ದರು. ಧರ್ಮಸಭೆಯ ಆಂತರಿಕ ಧಾರ್ಮಿಕ ಜೀವನವನ್ನು ನವೀಕರಿಸುವುದು, ಧರ್ಮ ಸಿದ್ದಾಂತ, ಬೋಧನೆ, ಆಚಾರ, ವ್ಯವಸ್ಥೆಗಳನ್ನು ಆಧುನಿಕ ಕಾಲಕ್ಕೆ ಸರಿಹೋಗುವಂತೆ ಸುಧಾರಿಸುವುದು, ಕ್ರಿಶ್ಚನ್ ಚರ್ಚುಗಳನ್ನು ಒಗ್ಗೂಡಿಸುವುದು-ಈ ಗುರಿಗಳನ್ನು ವಿಶ್ವಸಭೆ ಗಮನದಲ್ಲಿಟ್ಟು ತನ್ನ ಕಾರ್ಯಕಲಾಪಗಳನ್ನು ನಡೆಸಬೇಕೆಂದು ಜಾನ್ ನಿರ್ದೇಶನವನ್ನಿತ್ತ. ಪ್ರಥಮ ಆಧಿವೇಶನ ಮುಗಿದಮೇಲೆ, ಸಭೆಯ ನಿರ್ಣಯಗಳನ್ನು ಕಾರ್ಯಗತಗೊಳಿಸಲು ಒಂದು ಆಯೋಗವನ್ನು ಸ್ಥಾಪಿಸಿದ. ಆದರೆ ಸಭೆ ಮತ್ತೊಮ್ಮೆ ಸಮಾವೇಶಗೊಳ್ಳುವ ಮೊದಲೇ ಜಾನ್ ಸ್ವರ್ಗಸ್ಥನಾದುದರಿಂದ, ಅವನ ಉತ್ತರಾಧಿಕಾರಿ, ಆರನೆಯ ಪಾಲ್ ಎಂಬ ಪೋಪ್ ಸಭೆಯನ್ನು ಮುಂದುವರಿಸಿ ಮುಕ್ತಾಯಗೊಳಿಸಬೇಕಾಯಿತು. ಕ್ರಿಶ್ಚನ್ ಚರ್ಚುಗಳು ಒಗ್ಗೂಡುವ ದಿಸೆಯಲ್ಲಿ ಜಾನನ ಸಾಧನೆ ಗಣನೀಯ. ಈ ಉದ್ದೇಶಕ್ಕಾಗಿ ಪ್ರತ್ಯೇಕ ಕಾರ್ಯಕೇಂದ್ರದ ಸ್ಥಾಪನೆ, ವಲ್ರ್ಡ್ ಕೌನ್ಸಿಲ್ ಆಫ್ ಚರ್ಚಸ್ ಸಭೆಯಲ್ಲಿ ಅಧಿಕೃತ ಕ್ಯಾತೊಲಿಕ್ ವೀಕ್ಷಕರು ಭಾಗವಹಿಸಿದುದು ಇವನ ಕಾಲದಲ್ಲೇ, ಯೆಹೂದ್ಯರ ಮನನೋಯಿಸಬಹುದಾದ ಕೆಲವು ಪದಪ್ರಯೋಗಗಳು ಗುಡ್ ಫ್ರೈಡೆ ಆಚಾರವಿಧಿಯಲ್ಲಿ ಇದ್ದುವು. ಜಾನ್ ಈ ಪದಗಳನ್ನು ತೆಗೆದು ಹಾಕಬೇಕೆಂದು ಆಜ್ಞಾಪಿಸಿದ.

	ಪೋಪ್ ಪದವಿಗೆ ಬರುವ ಮೊದಲೇ ಜಾನ್ ಬಲ್ಗೇರಿಯ, ತುರ್ಕಿ, ಗ್ರೀಸ್ ಮತ್ತು ಫ್ರಾನ್ಸ್‍ನಲ್ಲಿ ವ್ಯಾಟಿಕನ್ ಪರವಾಗಿ ರಾಜತಾಂತ್ರಿಕ ಹುದ್ದೆಯಲ್ಲಿದ್ದ. ಈ ಕಾಲದಲ್ಲಿ ಇವನ ಮಾನವೀಯ ಅನುಕಂಪ ಅನೇಕ ವಿಧಗಳಲ್ಲಿ ಮೆರೆಯಿತು. ಗ್ರೀಕ್ ಬಂದರುಗಳ ಮೇಲೆ ಬ್ರಿಟಿಷರು ಒಡ್ಡಿದ ನೌಕಾಬಂಧನವನ್ನು ಸಡಿಲಗೊಳಿಸಿ ಆಹಾರ, ಔಷಧಿ ಸರಬರಾಜು ಏರ್ಪಡಿಸುವುದಕ್ಕಾಗಿ ವ್ಯಾಟಿಕನ್ ಮೂಲಕ ಬ್ರಿಟಿಷ್ ಸರ್ಕಾರದ ಮೇಲೆ ಈತ ಒತ್ತಡವನ್ನು ಬೀರಿದ. ನಾಪತ್ತೆಯಾದ ಸೈನಿಕರ ಬಗೆಗೆ ತನಿಖಾ ಕಚೇರಿಯನ್ನು ಇಸ್ತಾಂಬುಲಿನಲ್ಲಿ ಸ್ಥಾಪಿಸಿದ. ಫ್ರಾನ್ಸ್‍ನ ಅಧಿಕಾರಿಗಳು ಜರ್ಮನ್ ಯುದ್ಧಕೈದಿಗಳನ್ನು ಮಾನವೀಯವಾಗಿ ನೋಡಿಕೊಳ್ಳಬೇಕೆಂದು ಒತ್ತಾಯಿಸಿದ.

	ವಿಶ್ವಶಾಂತಿಯ ಬಗೆಗೆ ಜಾನನಿಗೆ ವಿಶೇಷ ಕಾಳಜಿ ಇತ್ತು. ಶಾಂತಿಯನ್ನು ಹೇಗಾದರೂ ಉಳಿಸಿಕೊಳ್ಳಬೇಕೆಂದು 1961ರ ಬರ್ಲಿನ್ ವಿಷಮಸ್ಥಿತಿಯಕಾಲದಲ್ಲಿ ವಿಶ್ವನಾಯಕರಿಗೆ ಮನವಿ ಮಾಡಿದ. ಇಂಥದೇ ಮನವಿಗಳನ್ನು ಆಲ್ಜೀರಿಯದಲ್ಲಿ ಆಂತರಿಕ ಯುದ್ಧ ನಡೆಯುವಾಗ (1962), ಕ್ಯೂಬಾ ಪ್ರಕರಣದ ಕಾಲದಲ್ಲಿ (1962) ಮತ್ತೆ ಮಾಡಿಕೊಂಡ. ಅಂತರರಾಷ್ಟ್ರೀಯ ಬಾಲ್ಜಾನ್ ಪ್ರತಿಷ್ಠಾನದ 1962ರ ಸಾಲಿನ ಶಾಂತಿಪಾರಿತೋಷಕ ಇವನಿಗೆ ಲಭಿಸಿತು.

	ಸರಳಜೀವಿಯೂ ಸ್ನೇಹಪರನೂ ವಿನಯಶೀಲನೂ ಆಗಿದ್ದ ಜಾನ್ ತಾನು ಹುಟ್ಟಿದ ಹಳ್ಳಿಯವರೊಡನೆ, ತನ್ನ ಮನೆಯವರೊಡನೆ ತುಂಬುವಾತ್ಸಲ್ಯದ ಸಂಬಂಧವಿರಿಸಿಕೊಂಡಿದ್ದ. ತನ್ನ ವಶಕ್ಕೆ ಒಪ್ಪಿಸಿದ ಕ್ರೈಸ್ತರ ಆತ್ಮಿಕ ಯೋಗಕ್ಷೇಮಗಳು ಇವನ ಪ್ರಧಾನ ಹಂಬಲವಾಗಿದ್ದವು. ಆಧ್ಯಾತ್ಮಿಕ ಕ್ಷೇತ್ರದಲ್ಲಿ ಇವನ ಸಾಧನೆಯ ಆಳವನ್ನೂ ಎತ್ತರವನ್ನೂ ಆತ್ಮದ ಪ್ರಯಾಣ (ಜರ್ನಿ ಆಫ್ ಎ ಸೋಲ್) ಎಂಬ ಇವನ ದಿನಚರಿಯಿಂದ ತಿಳಿಯಬಹುದು. ಜಾನನಿಗೆ ಚರಿತ್ರೆ, ಪ್ರಾಕ್ತನಶಾಸ್ತ್ರ, ಶಿಲ್ಪ, ಕಲೆ, ಸಾಹಿತ್ಯ, ಸಂಗೀತಗಳ ಪರಿಜ್ಞಾನವಿತ್ತು. ಫ್ರೆಂಚ್, ಬಲ್ಗೇರಿಯನ್, ರಷ್ಯನ್, ತುರ್ಕಿ, ಇಟಾಲಿಯನ್, ಲ್ಯಾಟಿನ್ ಭಾಷೆಗಳನ್ನು ಈತ ಬಲ್ಲವನಾಗಿದ್ದ.
(ಇ.ಎನ್.ಎಸ್.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ